Please assign a menu to the primary menu location under menu

State

‘ತರಂಗ’ ವಾರಪತ್ರಿಕೆಯ ಸಂಪಾದಕಿ ಡಾ| ಯು. ಬಿ. ರಾಜಲಕ್ಷ್ಮೀ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

‘ತರಂಗ’ ವಾರಪತ್ರಿಕೆಯ ಸಂಪಾದಕಿ ಡಾ| ಯು. ಬಿ. ರಾಜಲಕ್ಷ್ಮೀ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಉಡುಪಿ: ಮಣಿಪಾಲ ಸಮೂಹದ “ತರಂಗ’ ವಾರಪತ್ರಿಕೆಯ ಸಂಪಾದಕಿ ಡಾ| ಯು.ಬಿ. ರಾಜಲಕ್ಷ್ಮೀ ಅವರಿಗೆ 2020-21ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.

ರಾಜಲಕ್ಷ್ಮೀಯವರು 38 ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಹಂಪಿ ವಿ.ವಿ.ಯಿಂದ ಡಿ.ಲಿಟ್‌ ಪಡೆದಿರುವ ಇವರು ಕನ್ನಡ ಪತ್ರಿಕಾರಂಗದಲ್ಲಿ ಡಿ.ಲಿಟ್‌ ಪಡೆದ ಮೊದಲ ಪತ್ರಕರ್ತೆ. 1983ರಿಂದ 87ರ ವರೆಗೆ ಮುಂಗಾರು, ಹೊಸದಿಗಂತ, ಟೈಮ್ಸ್‌ ಆಫ್ ಡೆಕ್ಕನ್‌ ದಿನ ಪತ್ರಿಕೆಗಳ ವರದಿಗಾರ್ತಿಯಾಗಿದ್ದರು. 1987ರಲ್ಲಿ ತರಂಗ ವಾರಪತ್ರಿಕೆಯ ಉಪಸಂಪಾದಕಿಯಾಗಿ ಸೇರ್ಪಡೆಗೊಂಡು 2002ರಲ್ಲಿ ಸಹಾಯಕ ಸಂಪಾದಕಿ, 2004ರಿಂದ ಕಾರ್ಯನಿರ್ವಾಹಕ ಸಂಪಾದಕಿ, ಬಳಿಕ ಸಂಪಾದಕಿಯಾದರು.

ಹಿರಿಯ ಸಾಹಿತಿ ಕೊರಡ್ಕಲ್‌ ಶ್ರೀನಿವಾಸ ರಾವ್‌ – ಜೀವನಚರಿತ್ರೆ, “ಉಡುಪಿ ಅಡುಗೆ’, “ನೂಪುರ’ ನುಡಿಚಿತ್ರಗಳ ಮಣಿಗೆಜ್ಜೆ, “ಶಂಖನಾದ’ ಕ್ಷೇತ್ರದರ್ಶನ, “ಕನ್ನಡದ ಆಯ್ದ ವಾರಪತ್ರಿಕೆಗಳಲ್ಲಿ ನುಡಿಚಿತ್ರ: ಒಂದು ಗುಣಾತ್ಮಕ ಅಧ್ಯಯನ’- ಡಾಕ್ಟರೇಟ್‌ ಪಡೆದ ಸಂಶೋಧನ ಕೃತಿ, “ವಾರಪತ್ರಿಕೆಗಳಲ್ಲಿ ನುಡಿಚಿತ್ರ’ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ರಂಗಭೂಮಿ, ಹಾರ್ಮೋನಿಯಂ, ವಯೋಲಿನ್‌, ವೀಣಾವಾದನದಲ್ಲಿ ಪರಿಣತಿ ಹೊಂದಿರುವ ರಾಜಲಕ್ಷ್ಮೀ ಅವರು ಮಂಗಳೂರು ಆಕಾಶವಾಣಿಯ ಬಿ ಹೈಗ್ರೇಡ್‌ ನಾಟಕ ಕಲಾವಿದೆಯಾಗಿದ್ದಾರೆ.ಮಾಧ್ಯಮ ಅಕಾಡೆಮಿ ಸಹಿತ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ನೂರಾರು ಅಧ್ಯಯನಪೂರ್ಣ ಲೇಖನಗಳು “ತರಂಗ’ ಸಹಿತ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ರಾಜ್ಯೋತ್ಸವ ಪ್ರಶಸ್ತಿಯ ಗೌರವ “ತರಂಗ’ದ ಓದುಗರು, ಲೇಖಕರು, ಸಹೋದ್ಯೋಗಿಗಳು ವಿಶೇಷವಾಗಿ ನನ್ನನ್ನು ಗುರುತಿಸಿ ಬೆಳೆಸಿ ಜವಾಬ್ದಾರಿ ಕೊಟ್ಟ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ, ಸಂಸ್ಥೆಯ ಆಡಳಿತ ಮಂಡಳಿ, ನನಗೆ ಕೆಲಸ ಕೊಟ್ಟ ಆಗಿನ ಸಂಪಾದಕ ಸಂತೋಷಕುಮಾರ್‌ ಗುಲ್ವಾಡಿ, ನನ್ನನ್ನು ತಿದ್ದಿತೀಡಿದ ತಾಯಿ ದಿ| ಬಿ.ವನಜಾಕ್ಷಿಯವರಿಗೆ ಸಮರ್ಪಿಸುತ್ತಿದ್ದೇನೆ.”
-ಡಾ| ಯು.ಬಿ. ರಾಜಲಕ್ಷ್ಮೀ


Leave a Reply